ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಮಾತನಾಡುವ ಮುನ್ನ ಎಚ್ಚರವಿರಲಿ : ಸಚಿವ ಎನ್.ಚಲುವರಾಯಸ್ವಾಮಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಾಕೀತು

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಅವರು ಲಘುವಾಗಿ ಮಾತನಾಡಿದ್ದು, ಅವರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಲುವರಾಯಸ್ವಾಮಿ 1995ರಿಂದ ರಾಜಕಾರಣ ಮಾಡಿಕೊಂಡು ಬಂದಿದ್ದು, ಅವರ ಅದೃಷ್ಠ ಚನ್ನಾಗಿದೆ. ಹೊಸ ಅಭ್ಯರ್ಥಿಗಳನ್ನು ರಾಜಕೀಯಕ್ಕೆ ತಂದು ಆರ್ಥಿಕ ಬಲಿಷ್ಠರನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದಿರುವ ವ್ಯಕ್ತಿ ಅವರು ಎಂದು ದೂರಿದರು. ಹೆಚ್.ಡಿ.ದೇವೇಗೌಡರನ್ನು 45 ವರ್ಷಗಳಿಂದ ತಿಳಿದಿದ್ದು, ಅವರ ಭಾವನಾತ್ಮಕ ಜೀವಿ, ಅವರ ಕಳಕಳಿ ವಿಶೇಷವಾಗಿ ರೈತರ ಮೇಲಿನ ಸಹಾನುಭೂತಿಯನ್ನು ಬಹಳ ಹಂತಿರದಿಂದ ತಿಳಿದಿದ್ದೇವೆ. ಅವರ ಭಾವನೆಗಳೇ ಹಾಗೆ, ಅವರು ಹೃದಯದಿಂದ ಮಾತನಾಡುತ್ತಾರೆ ಎಂದು ಸಮರ್ಥಿಸಿಕೊಂಡರು.

ದೇವೇಗೌಡರು ಪ್ರಧಾನಿಯಾಗಿ 11 ತಿಂಗಳು, ಮುಖ್ಯಮಂತ್ರಿಯಾಗಿ 17 ತಿಂಗಳು ಮಾತ್ರ ಅಧಿಕಾರ ನಡೆಸಿದ್ದಾರೆ ಎಂದು ಹೇಳಿದ್ದು, ದೇವೇಗೌಡರು ನಿಮ್ಮಂತೆ ಪಕ್ಷ ಬದಲಾಯಿಸಿಲ್ಲ ಎಂದು ಚಾಟಿ ಬೀಸಿದ ಪುಟ್ಟರಾಜು, ದೇವೇಗೌಡ ನಡಾವಳಿಗಳನ್ನು ವಿಧಾನಸೌಧದ ಪುಸ್ತಕಗಳಲ್ಲಿ ಓದಿ ತಿಳಿದಿಕೊಳ್ಳುವಂತೆ ತಾಕೀತು ಮಾಡಿದರು. ಕುಮಾರಸ್ವಾಮಿ ಅವರ ಬಗ್ಗೆಯೂ ಸ್ಟೀಲ್ ಕಂಪನಿಯಲ್ಲಿ ವಸೂಲಿ ಮಾಡುತ್ತಾರೆ ಎಂದು ಹೇಳಿದ್ದು ಕುಮಾರಸ್ವಾಮಿ ಅವರು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಎಂಬುದನ್ನು ಮರೆತು ಮಾತನಾಡುತ್ತಿದ್ದೀರಿ, ಅವರು ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಣಕ್ಕಾಗಿ ಮುಂದಾಗಿದ್ದರೇ ಎರಡು ಬಾರಿ ಮುಖ್ಯಮಂತ್ರಿಗಳಾಗಿ ಲಾಟರಿ ಮತ್ತು ಸರಾಯಿಯನ್ನು ಏಕೆ ರದ್ದುಗೊಳಿಸಿ ರಾಜ್ಯದ ಹೆಣ್ಣು ಮಕ್ಕಳ ಪರವಾಗಿ ತೀರ್ಮಾನ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಚನ್ನಪಟ್ಟಣ ಜನತೆ ದೇವೇಗೌಡರು, ಕುಮಾರಸ್ವಾಮಿ ಅವರು ಮಾಡಿರುವಂತಹ ಕೆಲಸಗಳನ್ನು ನೆನೆದು ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡುವ ತೀರ್ಮಾನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ನೆಲೆಯೂರಿ ನಿಖಿಲ್ ಗೆಲ್ಲಿಸಲು ಪಣತೊಟ್ಟಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಮಾತನಾಡಿದರೆ ರಾಜ್ಯದಲ್ಲಿ ದೊಡ್ಡ ನಾಯಕರಾಗುತ್ತೇವೆ ಎಂಬ ಮನಸ್ಥಿತಿಯಿದ್ದರೆ, ಅದನ್ನು ಬಿಡಬೇಕು. ಜನತೆ ರಾಜ್ಯದಲ್ಲಿ 136 ಸ್ಥಾನ ಕೊಟ್ಟಿದ್ದು ಚನ್ನಾಗಿ ಕೆಲಸ ಮಾಡಿ, ಕಳೆದ 14 ತಿಂಗಳಲ್ಲಿ ಏನು ಕೆಲಸ ಮಾಡಿದ್ದೀರ ಎಂಬುದನ್ನು ತಿಳಿಸಬೇಕು. ಉಪಚುನಾವಣೆ ನಂತರ ನಿಮ್ಮ 136 ಸ್ಥಾನಗಳು ಎಷ್ಟು ಗುಂಪಾಗಲಿದೆ ಎಂದು ತಿಳಿಯಲಿದೆ ಎಂದು ಭವಿಷ್ಯ ನುಡಿದರು.
ಕೀಲಾರ ಜಯರಾಮ್ ಅವರು ಜೆಡಿಎಸ್ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಎಸ್.ಪುಟ್ಟರಾಜು ಅವರು, ಮೈಸೂರು ಚಾಮುಂಡಿದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ತಿಳಿಸುವಂತೆ ಕರೆ ನೀಡಿದರು.


ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಅಧಿಕಾರಸ್ಥರು ತಾಳ್ಮೆ ವಹಿಸಬೇಕು. ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡುತ್ತಾರೆ, ತಾಳ್ಮೆಯಿಂದ ಉತ್ತರ ನೀಡಿ, ಸಮಸ್ಯೆ ಬಗೆಹರಿಸಬೇಕು. ತಾಳ್ಮೆ ವಹಿಸದಿದ್ದರೆ ಕೀಲಾರ ಜಯರಾಮ್ ಜತೆ ನಡೆದಂತಹ ಘಟನೆಗಳು ಸಂಭವಿಸುತ್ತವೆ ಎಂದು ಹೇಳಿದರು. ಸಾತನೂರು, ಕೋಡಂಬಳ್ಳಿ ವ್ಯಾಪ್ತಿಯಲ್ಲಿ ಮಂಡ್ಯ ಜಿಲ್ಲೆಯವರೇ ಪೂರ್ಣ ಆವರಿಸಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ಹಾಗೂ ಅಭ್ಯರ್ಥಿ ಯೋಗೇಶ್ವರ್ ನಡುವೆ ಏನು ಭಿನ್ನಾಭಿಪ್ರಾಯ ಇದೆಯೋ ತಿಳಿಯದು. ಅವರು ನಾವು ಪ್ರಚಾರ ಮಾಡುವ ವ್ಯಾಪ್ತಿಯಲ್ಲಿ ಕಂಡುಬಂದಿಲ್ಲ ಎಂದು ತಿಳಿಸಿದರು.


ಗೋಷ್ಠಿಯಲ್ಲಿ ಮುಖಂಡರಾದ ಅಮರಾವತಿ ಚಂದ್ರಶೇಖರ್, ತಾಯೂರು ಪ್ರಕಾಶ್ ಇತರರಿದ್ದರು.