ಮೈಷುಗರ್ ಪ್ರೌಢಶಾಲೆಯ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 13 ಮತ್ತು 14ರಂದು ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೈಷುಗರ್ ಅಧ್ಯಕ್ಷ ಹಾಗೂ ಮೈಷುಗರ್ ಪ್ರೌಢಶಾಲೆ ಅಮೃತ ಮಹೋತ್ಸವ ಸಮಿತಿ ಪೋಷಕ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಪ್ರೌಢಶಾಲೆಗೆ 75 ವರ್ಷಗಳು ತುಂಬಲಿದ್ದು, ಈ ಶಾಲೆಯಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಕಂಡಿರುವುದು ಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ , ಕಾರ್ಯಕ್ರಮವು ಆದಿಚುಂಚಿನಗಿರಿ ಮಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಪ್ರಾರಂಭಗೊಳ್ಳಲಿದ್ದು, ನಾಡಿನ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶಾಲೆಯಲ್ಲಿ ವ್ಯಾಸಂಗ ಮಾಡಿ ಸಾಧನೆಗೈದ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಯಲ್ಲಿ ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳ ಸಂಬಂಧ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ ಡಿ.6,7 ಮತ್ತು 8 ರಂದು ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ 17 ವರ್ಷದೊಳಗಿನವರ ರಾಜ್ಯ ಮಟ್ಟದ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ ಎಂದರು.
ಕಾರ್ಯಕ್ರಮ ಯಶಸ್ವಿಗೊಳಿಸುವ ಸಂಬಂಧ ಆಸಕ್ತ ಹಿರಿಯ ವಿದ್ಯಾರ್ಥಿಗಳು ಧನ ಸಹಾಯ ಮಾಡುವ ಮೂಲಕ ಪ್ರೋತ್ಸಾಹ ನೀಡುವಂತೆ ಇದೇ ವೇಳೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ರಮೇಶ್, ಗೌರವಾಧ್ಯಕ್ಷ ಜಯರಾಮ್, ಖಜಾಂಜಿ ಸತ್ಯನಾರಾಯಣದೇವ್, ಶ್ರೀನಿಧಿ, ನಾಗರಾಜ್ ಇದ್ದರು.